ನೆನಪುಗಳ ಮಾತು ಮಧುರ...
ಮೊನ್ನೆ ಕಛೇರಿಯಲ್ಲಿ ಕುಳಿತು ಕಾಫೀ ಹೀರುತ್ತಿದ್ದ ಸಮಯ. ಸಾಮಾನ್ಯವಾಗಿ ನಾವು ಪ್ರಾಪಂಚಿಕ, ನೈಸರ್ಗಿಕ, ಪ್ರಾಚೀನ, ಹೊಸ-ಹಳೆ ಹತ್ತು ಹಲವು ವಿಚಾರವನ್ನು ಹರಟುವ ಸಮಯವಿದು. ಆ ದಿನ ಹೀಗೆ ಮಾತನಾಡುತ್ತಾ ಬಂದ ವಿಷಯ ಬಾಲ್ಯ ಮತ್ತು ಆ ದಿನಗಳು. ನಾನೇನು ಬಹಳ ಹಳಬಳಲ್ಲ. ಈಗಿನವರ ಮಾತಲ್ಲಿ ಹೇಳೋದಾದ್ರೆ ೯೦ʼಸ್ ಕಿಡ್. ಆದರೂ ೮೦ರ ಸಹೋದ್ಯೋಗಿಗಳ ಬಾಲ್ಯ ಮತ್ತು ಆಗಿದ್ದ ನೆನಪುಗಳಿಗೂ , ನನ್ನ ಬಾಲ್ಯದ ದಿನಗಳಿಗೂ ಜಾಸ್ತಿ ಏನೂ ವ್ಯತ್ಯಾಸವಿಲ್ಲ ಅನ್ನಿಸಿತು. ಆದರೆ, ಕಳೆದ ೧೦-೧೫ ವರ್ಷ ಎಷ್ಟು ಬೆಳವಣಿಗೆಗಳಾಗಿದೆ ಎಂದರೆ ನನಗೇ ವಯಸ್ಸಾಯ್ತು ಅನ್ನಿಸೋವಷ್ಟು.!
ಮೊದಲೆಲ್ಲಾ ಹೋಟೆಲ್ ಅಂದ್ರೆ ಏನೋ ಖುಷಿ. ವರ್ಷಕ್ಕೆ ಎರಡೋ ಮೂರೋ ಬಾರಿ ಹೋಟೆಲ್ ಊಟ ಸವಿಯುವ ಭಾಗ್ಯ. ಅದೂ, ಹೆಚ್ಚೆಂದರೆ ಮಸಾಲೆ ದೋಸೆ, ಇಡ್ಲಿ ವಡೆ, ಐಸ್ ಕ್ರೀಮ್ ಮತ್ತೊಂದು ತಂಪು ಪಾನೀಯ.
ಹಬ್ಬ-ಹರಿದಿನ ಅಥವಾ ಹುಟ್ಟು ಹಬ್ಬ ಬಂದರೆ ಹೊಸ ಬಟ್ಟೆ..ಹೊಸ ಬಟ್ಟೆ ತೆಗೆದುಕೊಳ್ಳೋಕೆ ಅಂಗಡಿಗೆ ಹೋಗಿ,ಹೋಗಿ ಆ ಅಂಗಡಿಯ ರೆಗ್ಯುಲರ್ ಗ್ರಾಹಕರಾಗ್ತಿದ್ವಿ. ಅಥವಾ ಇದ್ದಿದ್ದೇ ಮೂರು ಮತ್ತೊಂದು ಊರಿಗೆಲ್ಲಾ ಫೇಮಸ್ ಅಂಗಡಿಗಳು ಅಂತ ಅಂದ್ರೂ ತಪ್ಪಿಲ್ಲ.
ಸಂಜೆ ಶಾಲೆ ಮುಗಿಸಿ ಬಂದು ಬ್ಯಾಗ್ ಎಸೆದು ಅಕ್ಕ ಪಕ್ಕದ ಮನೆ ಮಕ್ಕಳೆಲ್ಲಾ ಸೇರಿ ಲಗೋರಿ, ಕ್ರಿಕೆಟ್, ಕುಂಟಬಿಲ್ಲೆ ಆಡೋ ಮಜಾನೇ ಬೇರೆ. ದಸರ ರಜ ಆ ದಿನಗಳ ಸುಂದರ ಸಮಯ. ಇನ್ನೇನು ರಜ ಆರಂಭ ಆಗೋವಷ್ಟ್ರಲ್ಲಿ ಅಜ್ಜಿ ಮನೆ ಸೇರಿಕೊಂಡ್ರೆ ಅಲ್ಲಿ ದೊಡ್ಡಮ್ಮ, ಚಿಕ್ಕಮ್ಮ, ಅವರ ಮಕ್ಕಳು ಎಲ್ಲಾ ಸೇರಿ ಫ್ಯಾಮಿಲಿ ಮೀಟ್ ಆಗ್ತಿತ್ತು. ಅಲ್ಲಿಯೇ ನಾನು ಪಗಡೆ, ಚನ್ನೆಮಣೆ ಆಡೋದು ಕಲಿತಿದ್ದು.
ದೊಡ್ಡೋರು ಚಿಕ್ಕೋರು ಅನ್ನದೆ ಎಲ್ಲರೂ ಸೇರಿ ಆಡ್ತಿದ್ದ ಕ್ರಿಕೆಟ್ ಆಟ. ಅಟ್ಟದ ಮನೆ, ಕಣ್ಣಾ ಮುಚ್ಚಾಲೆ, ತೋಟದಲ್ಲಿ ಹೆಕ್ಕಿ ತಿನ್ನೋ ನೇರಳೆ, ಗೋಡಂಬಿ ಹಣ್ಣು, ಸುಟ್ಟು ತಿನ್ನೋ ಗೋಡಂಬಿ ಬೀಜ, ಕಲ್ಲು ಹೊಡೆದು ಬೀಳ್ಸಿ ತಿನ್ನೋ ಮಾವಿನ ಹಣ್ಣಿನ ರುಚಿ ಬೇರೇನೇ. ಚೆನ್ನಾಗಿ ಓದಬೇಕು ಅಂತ ಇತ್ತು ಆದರೆ ಓದದೇ ಇದ್ರೆ ಭವಿಷ್ಯ ಇಲ್ಲ ಅನ್ನೋ ಭಯ ಇರಲಿಲ್ಲ. ಡಿಸೆಂಬರ್ ಬಂದರೆ ಶಾಲಾ ಪ್ರವಾಸ, ಏಪ್ರಿಲ್ ಬಂದರೆ ಬೇಸಿಗೆ ರಜೆ ಹೀಗಿತ್ತು ನಮ್ಮ ಬಾಲ್ಯ. ಈ ಮಧ್ಯ ಬಂದಿದ್ದು ಪುಸ್ತಕ ಓದೋ ಹುಚ್ಚು. ಸಾಹಿತ್ಯ ಸಮ್ಮೇಳನ ದಲ್ಲಿ ಬರುತ್ತಿದ್ದ ಅಂಗಡಿಗಳಲ್ಲೇ ಕುಳಿತು ಒಂದಿಡೀ ಪುಸ್ತಕ ಓದಿ ಮುಗಿಸುತ್ತಿದ್ದೆ ಅಂತ ಅಮ್ಮ ಇವಾಗಲೂ ಹೇಳ್ತಾರೆ. ಇವಾಗಲೂ ಆ ಹುಚ್ಚು ಇದೇ ಅಂತ ಹೆಮ್ಮೆ.
ಇಷ್ಟೇ ಅಲ್ಲ, ಮಣ್ಣಲ್ಲಿ ಅಡುಗೆ ಆಟದ ನೆನಪು ಮಾಡಿಕೊಂಡ್ರೆ ಇವಾಗಲು ಆಡೋ ಮನಸಾಗತ್ತೆ. ಸೊಪ್ಪುಗಳನೆಲ್ಲ ಕುಟ್ಟಿ ಚಟ್ನಿ ಅಂತ ಮಾಡಿ ಆಟ ಆಡ್ತಿದ್ವಿ. ಹಬ್ಬಗಳು ಬಂದ್ರೆ ಮನೇಲಿ ಪಾಯಸ, ಹೋಳಿಗೆ ಖಾಯಂ. ಪ್ರತಿ ವರ್ಷ ದೀಪಾವಳಿ ದಿನ ಬರ್ತಿದ್ದ ಆಪ್ತಮಿತ್ರ ಚಲನಚಿತ್ರ, ದೊಡ್ಡ ಹಬ್ಬದಂದು ಬರುತಿದ್ದ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಚಿತ್ರಗಳು ಹಾಗೂ ಅದನ್ನ ಮನೆಯವರೆಲ್ಲ ಕೂತು ಜೊತೆಗೆ ನೋಡುತ್ತಿದ್ದ ಸಮಯ ಈಗ ಬೇಕೆಂದರು ಸಿಗೋಲ್ಲ. ನನಗೆ ನೆನಪಿರೋ ಹಾಗೆ ನಾನು ಚಿತ್ರಮಂದಿರಕ್ಕೆ ಹೋಗಿ ನೋಡಿದ ಮೊದಲ ಚಿತ್ರ ಯಜಮಾನ. ಹಾಗೇ, ಟೇಪ್ ರೆಕಾರ್ಡರ್ ಅಲ್ಲಿ ಕ್ಯಾಸೆಟ್ ಹಾಕಿ ಹಾಡುಗಳನ್ನು, ಯಕ್ಷಗಾನ ಹರಿಕಥೆಯನ್ನು ಕೇಳ್ತಾ ಇದ್ವಿ. ನಂತರ, ಡಿ.ವಿ.ಡಿ ಬಂತು. ಸಿ.ಡಿ ಗಳನ್ನ ಕೊಂಡು ಅದರಲ್ಲಿ ಸಿನೆಮಾ ನೋಡೋದು ಏನೋ ಮಜಾ. ಪಕ್ಕದ ಮನೆಗೆ ಕಂಪ್ಯೂಟರ್ ಬಂದಾಗ, ವಠಾರದ ಮಕ್ಕಳೆಲ್ಲಾ ಅವರ ಮನೆಯಲ್ಲೇ ಖಾಯಂ ಹಾಜರಿ! ಅಚ್ಚರಿ, ಆನಂದ, ಏನೋ ವಿಚಿತ್ರವಾದ ಉಪಕರಣ ನೋಡಿದ ಅನುಭವ.
ಇನ್ನು ಅಡುಗೆ ಆಹಾರ. ..ಏನು ತಿನ್ಬೇಕು ಅನ್ಸಿದ್ರು ಮನೇಲೆ ಮಾಡ್ಕೊಂಡು ತಿಂತಿದ್ದ ಕಾಲ ಅದು. ಸ್ವಿಗ್ಗಿ,. ಝೋಮೇಟೊ ಅನ್ವೇಷಣೆ ಇನ್ನೂ ಆಗಿರಲಿಲ್ಲ. ಏನಾದ್ರು ವಿಶೇಷವಾಗಿ ತಿನ್ಬೇಕು ಅನ್ಸಿದ್ರೆ ಒಂದ್ ಅರ್ಧ ದಿನ ಅಮ್ಮ ಅಡುಗೆ ಮಾಡಿ ನಂತರ ತಿನ್ನುವಾಗ ಅಮ್ಮನ ಪ್ರೀತಿಯೇ ಬಡಿಸಿರೋ ಅನುಭೂತಿ. ಹೋಳಿಗೆ, ಪಾಯಸ, ಕರ್ಜಿಕಾಯಿ, ಚಟ್ಟಂಬಡೆ, ಇಡ್ಲಿ, ವಡೆ, ದೋಸೆ ಹೀಗೆ ಏನು ಬೇಕಾದ್ರೂ ಮಾಡೋ ವಿಶೇಷ ಶಕ್ತಿ ನಮ್ಮ ಹಿರಿಯರಿಗಿತ್ತು.
ಮೊಬೈಲ್ ಅನ್ನೋ ಮಾಯಾಜಾಲ ನಮ್ಮ ಕೈಗೆ ಬಂದಿದ್ದೆ ಪಿ.ಯು.ಸಿ ನಂತರ. ಆಗಲೂ ತಿಂಗಳಿಗೆ ೧ ಜಿ.ಬಿ. ಡೇಟಾ , ೧೦೦ ಸಂದೇಶಗಳ ಮಿತಿ ಇದ್ದಂತ ಕಷ್ಟ ಕಾಲ! ಶಾಲೆ, ಕಾಲೇಜುಗಳಲ್ಲಿ ಇದ್ದಂತಹ ಗೆಳೆಯ-ಗೆಳತಿಯರೇ ಶಾಶ್ವತ ಎಂದುಕೊಳ್ಳುತ್ತಿರುವಾಗ ಬಂದಿದ್ದು ಫೇಸ್ ಬುಕ್ ! ಇದರ ಬಗ್ಗೆ ಹೆಚ್ಚೇನೂ ಹೇಳೋ ಅವಶ್ಯಕತೆ ಇಲ್ಲ.
ಸ್ವಲ್ಪ ಈಗಿನ ವಾತಾವರಣಕ್ಕೆ ಬರೋಣ...
ಪೋಷಕರು ಭಯದಿಂದಲೋ ಅಥವಾ ಅತಿಯಾದ ಕಾಳಜಿಯಿಂದಲೋ ಮನೆಯಿಂದ ಮಕ್ಕಳನ್ನು ಹೊರಗೆ ಕಳ್ಸೋಲ್ಲಾ. ಎಲ್ಲವು ಸುಲಭವಾಗಿ ಸಿಗೋದ್ರಿಂದ ಮಕ್ಕಳಿಗೆ ಚಿಕ್ಕ ಚಿಕ್ಕ ಸಂತೋಷಗಳ ಅರ್ಥ ಗೊತ್ತಾಗೋದು ಇಲ್ಲ ಅಥವಾ ಅದರ ಪ್ರಾಮುಖ್ಯತೆನು ತಿಳಿತಾ ಇಲ್ಲ.
ಇನ್ನು, ಕನ್ನಡದ ಬಗ್ಗೆ ಮಾತಾಡೋಕೆ ಬೇಸರವಾಗತ್ತೆ. ಕನ್ನಡ ಪುಸ್ತಕ ಓದೋರನ್ನ ನೋಡಿದ್ರೆ ಏನೋ ಸಮಾಧಾನ. ಆಂಗ್ಲ ಭಾಷೆ ಖಂಡಿತಾ ಈಗಿನ ವಾತಾವರಣಕ್ಕೆ ಅತ್ಯವಶ್ಯ ಆದರೆ ಕನ್ನಡವನ್ನು ಮರೆಯುವಷ್ಟಲ್ಲ.
ಮನೆಯಲ್ಲಿ ತಮ್ಮ ಮಗು ಆಂಗ್ಲ ಭಾಷೆ ಮಾತಾಡಿದ್ರೆ ಏನೋ ಖುಷಿ ಪೋಷಕರಿಗೆ. ಇದು ಇತ್ತೀಚಿಗೆ ಘನತೆಯ ಪ್ರಶ್ನೆಯೂ ಆಗಿದೆ! ಮೊಬೈಲ್ ಫೋನ್ ಅನ್ನೋದು ದೊಡ್ಡ ವಯಸ್ಸಿಗೆ ಸೀಮಿತ ಆಗಿಲ್ಲ. ಬದಲಾಗಿ ಹತ್ತರ ಮಕ್ಕಳು ಕೂಡ ಇನ್ಸ್ಟಾಗ್ರಾಮ್ ಎಂಬ ಜಾಲದಲ್ಲಿ ಕಾಣ ಸಿಗುತ್ತಾರೆ. ಮುಖ ನೋಡದೇ ಸಾವಿರಾರು ಜನ ಹಿಂಬಾಲಕರು ಇರುವ, ಪ್ರತಿ ವಾರ ವಾರಕ್ಕೂ ಒಬ್ಬೊಬ್ಬರೂ, ಒಂದೊಂದು ಹೊಸ ಟ್ರೆಂಡ್ ಸೃಷ್ಟಿ ಮಾಡೋ ಕಾಲ ಇದು. ದಿನಕ್ಕೆ ೧.೫ ಜಿ.ಬಿ ಡೇಟಾ ಇದ್ದರೂ ಸಾಲೋದಿಲ್ಲ. ಸಿನೆಮಾ ಅನ್ನೋದು ಒ.ಟಿ.ಟಿ ಯಲ್ಲಿ ಬಿಡುಗಡೆಯಾದ ಮೂರೇ ವಾರದಲ್ಲಿ ನೋಡ ಸಿಗುತ್ತದೆ. ಯಾರೋ ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತು ಆಡೋ ಮಾತು ಇನ್ನೆಲ್ಲೋ ಕಿಚ್ಚು ಹಚ್ಚುತ್ತದೆ. ಯಾವುದೋ ವಿಷಯದ ಬಗ್ಗೆ ತಿಳಿಯಬೇಕು ಅಂದರೆ ಕೈ ಬೆರಳ ತುದಿಯಲ್ಲೇ ಪ್ರತಿ ವಿಷಯವೂ ಲಭ್ಯ ಇದೆ. ಒಳ್ಳೆಯ ಮತ್ತು ಕೆಟ್ಟದರ ನಡುವಿನ ವ್ಯತ್ಯಾಸ ಗೊತ್ತಿರಬೇಕು ಮತ್ತು ಎಲ್ಲವೂ ಮಿತಿಯಲ್ಲಿರಬೇಕು ಅಷ್ಟೆ. ಇವೆಲ್ಲಾ ಎಲ್ಲಿ ಹೋಗಿ ತಲುಪುವುದೋ ಗೊತ್ತಿಲ್ಲ.!
ನನ್ನ ಪ್ರಕಾರ ಕಾಲ ಎಷ್ಟೇ ಬದಲಾದರು ನಮ್ಮ ಬೇರುಗಳನ್ನ ಮರೆಯಬಾರದು. ಮಕ್ಕಳು ಪುಸ್ತಕ ಓದ್ಬೇಕು. ಹೊರಗಡೆ ಹೋಗಿ ಆಟ ಆಡ್ಬೇಕು. ಬರೀ ಪ್ರಶಂಸೆ ಮತ್ತು ಪ್ರಶಸ್ತಿ ಅಥವಾ ಗೆಲುವಿಗಾಗಿ ಅಲ್ಲ..ತಮ್ಮ ಸುಂದರ ಬಾಲ್ಯವನ್ನು ನೆನಪಿನಲ್ಲಿಡಲು. ಮನೆಗಳಲ್ಲಿ ಹಬ್ಬಗಳನ್ನ ಆಚರಿಸಬೇಕು... ಮುಂದಿನ ಪೀಳಿಗೆಯೂ ಇದನೆಲ್ಲ ಮರೆಯದಿರಲು.
ನೀವೇ ನಿಮ್ಮ ಬಾಲ್ಯವನ್ನ ಒಮ್ಮೆ ನೆನಪು ಮಾಡಿಕೊಂಡು ನೋಡಿ...ಹೌದು...ನಿಮಗೆ ಕರ್ಜಿಕಾಯಿ ಮಾಡೋಕೆ ಬರತ್ತಾ? ಇಲ್ಲಾ ಅಂದ್ರೆ ಇವಾಗ್ಲೆ ಹೋಗಿ ನಿಮ್ಮ ಅಮ್ಮಂಗೆ ಕೇಳಿ. ...
Comments
Post a Comment