ಬಂಡಾಜೆ ಚಾರಣ

ಮಳೆಗಾಲದ ಚಾರಣ ಅಥವಾ Monsoon trek ಇದು ಬಹುಜನರ ಕನಸು. ಮಳೆಗಾಲ ಆರಂಭ ಆಗುತ್ತಿದ್ದಂತೆ ತಮ್ಮ bike, car ತಗೊಂಡು ಚಾರ್ಮಾಡಿ ಘಾಟ್ ಅಲ್ಲಿ ಒಂದ್ ಟ್ರಿಪ್ ಮಾಡ್ಕೊಂಡ್ ಹಾಗೆ ಕುದ್ರೆಮುಖ road ನಲ್ಲಿ ಹೋಗ್ತಾ ಇದ್ರೆ ...ಮನಸಲ್ಲಿ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಹಾಡು play ಆಗ್ತಾ ಇರತ್ತೆ.
ಎಲ್ಲರಂತೆ ನಾವು ಅನ್ನೋ ಹಾಗೆ, ಒಂದು ತಿಂಗಳ ಮುಂಚೆ ಚಾರಣದ ಪ್ಲಾನ್ ಮಾಡಿದ್ವಿ. ಅದೇ "ಬಂಡಾಜೆ ಚಾರಣ".
ಪ್ರತಿ ಬಾರಿ ತರ ಈ ಸಲನು ಪ್ಲಾನ್ ಫ್ಲಾಪ್ ಆಗೋದ್ರೆ ಅನ್ನೋ ಸಣ್ಣ ತಳಮಳ ಮನಸಲ್ಲಿ ಇಟ್ಕೊಂಡೆ ತಯಾರಿ ಆರಂಭ ಆಯ್ತು. ಒಟ್ಟು ಆರು ಜನ ಇದ್ದ ಪುಟ್ಟ ತಂಡ ಚಾರಣಕ್ಕೆ ಬೇಕಾದ ಶೂ, ರೈನ್ jacket, bags ಇತ್ಯಾದಿ. ವಸ್ತುಗಳನ್ನ ತಗೊಂಡು ಸಿದ್ಧ ಆದ್ವಿ.
ಗೈಡ್ ನ ಪರಿಚಯ ಇದ್ದಿದ್ದರಿಂದ ಮೊದ್ಲೇ ನಾವು ಬರೋ ವಿಷಯ ಹೇಳಿ ಫಾರೆಸ್ಟ್ permission ತಗೊಂಡು ಆಗಿತ್ತು.
ವೇಣೂರು ನಮ್ಮನೆ. Work from home ಇದ್ದಿದ್ದರಿಂದ ಮನೇಲೇ ಇದ್ದೆ. ಉಳಿದವರು ಬೆಂಗಳೂರಿನಿಂದ ಬಂದು ನಮ್ಮನೇಲಿ ವಿಶ್ರಾಂತಿ ತಗೊಂಡು ಸುತ್ತ ಮುತ್ತ ವಿಹಾರ ಮಾಡಿ ದಿನವನ್ನು ಮುಗ್ಸಿದ್ವಿ.

ಚಾರಣದ ದಿನ :
ಬೆಳಗ್ಗೆ ೫.೩೦ಕ್ಕೆ ವೇಣೂರಿನಿಂದ ಸುಂಕಸಾಲೆ ಗೆ ಪ್ರಯಾಣ ಆರಂಭ ಆಯ್ತು. ಸುಮಾರು ಎರಡು ಗಂಟೆಗಳ ಪ್ರಯಾಣ ಇದು. ಕೊಟ್ಟಿಗೆ ಹಾರದಲ್ಲಿ ಟೀ ಕುಡ್ದು, ಸುಂಕಸಾಲೆ ತಲುಪಿದಾಗ ಗಂಟೆ ೮.೦೦.
ಬರೋ ವಿಷಯ ಹೇಳಿದ್ದರಿಂದ ಗೈಡ್ ಮನೇಲಿ ಪಲಾವ್ ರೆಡಿ ಆಗಿತ್ತು. ತಿಂಡಿ ಮುಗಿಸಿ ಮದ್ಯಾಹ್ನದ ಊಟಕ್ಕೆ ನಾವು ತಂದ ಟಿಫಿನ್ ಬಾಕ್ಸ್ ಗಳಲ್ಲಿ ಪಲಾವ್ ತುಂಬಿಸಿಕೊಂಡು ಬ್ಯಾಗ್ ಗಳೊಂದಿಗೆ ಚಾರಣಿಗರು ಸಿದ್ಧರಾದ್ವಿ.

ಬೆಟ್ಟ ಹತ್ತಲು ಸುಮಾರು ೯.೦೦ ಗಂಟೆಗೆ ಆರಂಭಿಸಿದ ನಮಗೆ ಮೊದಲು ಸ್ವಾಗತ ಕೋರಿದ್ದು ಮಳೆಗಾಲದ ಅತಿಥಿಗಳು, ಚಾರಣಿಗರ ಸ್ನೇಹಿತರಾದ ಜಿಗಣೆಗಳು(Leech). Volini ಸ್ಪ್ರೇ, ಉಪ್ಪು, ನಶ್ಯ ಹೀಗೆ ಯಾವುದೇ ಆಯುಧಗಳಿದ್ದರೂ ಯಾವುದನ್ನೂ ಲೆಕ್ಕಿಸದೆ ನಿಮಗೇ ಗೊತ್ತಿಲ್ಲದೆ ನಿಮ್ಮ ದೇಹದ ಮೇಲೆ ಸೇರಿಕೊಳ್ಳುವಂತ ಅಧ್ಬುತ ಕಲೆಗಾರರು ಇವುಗಳು!!! (ಕಚ್ಚಿದ ನಂತರ ಸೋರುವ ರಕ್ತ ನೋಡಲು ದೇವರಿಗೇ ಪ್ರೀತಿ!!)
ಸುಮಾರು ೩ ಕಿಲೋ ಮೀಟರ್ ಕಾಡು ದಾರಿ ಇರುವುದರಿಂದ ಕಾಡಿನ ಸೌಂದರ್ಯ ಸವಿಯುತ್ತಾ ಜಿಗಣೆನ ಮರೆತು ಹೋಗೋದೇ ಸುಖ ಪ್ರಯಾಣದ ಗುಟ್ಟು.
ಇದೇ ಮಧ್ಯದಲ್ಲಿ ಒಂದು ಅಡ್ಡ ದಾರಿ ಹಿಡಿದು ಸ್ವಲ್ಪ ನಡೆದು ಹೋದ್ರೆ ನಮಗೆ ಕಂಡಿದ್ದು ಅತ್ಯದ್ಭುತವಾದ ರಾಣಿ ಝರಿ. ಇಲ್ಲಿ ಝರಿ ಅಂದ್ರೆ ಕಡಿದಾದ ಗುಡ್ಡ ಎಂಬರ್ಥ ಇದೆ.
ಇನ್ನೊಂದ್ ಸ್ವಲ್ಪ ತಡ ಆಗಿದ್ರೆ ಮೋಡದಲ್ಲಿ ಮುಚ್ಚಿ ಹೋಗ್ತಿತ್ತು ಈ ದೃಶ್ಯ...ಆದ್ರೆ ನಮ್ಮ ಅದೃಷ್ಟಕ್ಕೆ ಆ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡು ಒಂದಿಷ್ಟು mandatory ಛಾಯಾಚಿತ್ರ(photographs)ವನ್ನು ಕ್ಲಿಕ್ಕಿಸಿ ಪ್ರಯಾಣ ಮುಂದುವರೆಸಿದವು.
ಕಾಡಿನ ದಾರಿಯ ನಂತರ ಸಿಗೋದು ಹುಲ್ಲುಗಾವಲು. ಮುಂದಿರುವ ಅಷ್ಟೂ ದೂರವೂ ಇದರ ನಡುವಿನ ನಡೆ.
ಇದಕ್ಕೆ ಅನ್ಸತ್ತೆ ಹಸಿರು ಬಣ್ಣವನ್ನು ಜೀವ, ಬೆಳವಣಿಗೆ, ಸೌಹಾರ್ದತೆಗೆ ಸಾಕೆಂತಿಸಿರುವುದು.

ಹಚ್ಚ ಹಸಿರ ಪೈರು, ಸ್ವಚ್ಚ ಗಾಳಿ, ಜಿನುಗೋ ಮಳೆ, ಮುಗಿಯದ ಮಾತು...ಇದರ ನಡುವೆ ನಡ್ಕೊಂಡ್ ಹೋಗೋ ಖುಷಿನ ಪದಗಳಲ್ಲಿ ಹೇಳೋದು ಸ್ವಲ್ಪ ಕಷ್ಟ.
ಹೀಗೆ ಮುಂದೆ ಹೋಗೋವಾಗ ಒಂದು ಜಂಕ್ಷನ್ ಸಿಗ್ತು.
ಇಂಥ ಟೈಮ್ ಅಲ್ಲಿ ಗೈಡ್ ಉಪಯೋಗಕ್ಕೆ ಬರೋದು.
ಬೆಟ್ಟದ ಇಂಚಿಂಚು ಮಾಹಿತಿ ಇರೋದ್ರಿಂದ ಯಾವ ಸ್ಥಳಕ್ಕೆ ಮೊದ್ಲು ಹೋದ್ರೆ ಒಳ್ಳೇದು ಅಂತ ಚೆನ್ನಾಗಿ ಹೇಳ್ತಾರೆ.
ಅವ್ರ ದಾರಿಯಂತೆ ಮತ್ತೆ ಒಂದು ಸಣ್ಣ ಬಲ ತಿರುವು ತಗೊಂಡು ನಡೆಯುವುದನ್ನ ಮುಂದುವರಿಸಿದೆವು.
ಈ ದಾರಿ ಕೆಳಜಾರಿನದ್ದು. ಅಂದ್ರೆ ಕಲ್ಲು ಬಂಡೆ ಮಧ್ಯ ಇಳಿಯುವಿಕೆಯಲ್ಲಿ ಇರತ್ತೆ ನಮ್ಮ ನಡೆ.
ಸುಮಾರು ೫ ಕಿಲೋ ಮೀಟರ್ ದಾರಿ ಇದು. ಕೆಲವೊಂದು ಕಡೆ ಜಾಗ್ರತೆ ಅಗತ್ಯ. ಕಾಲ್ ಜಾರಿದ್ರೆ ಕೆಳಗೆ ಪ್ರಪಾತ.!
ಈಗ ನಾವು ಹೋಗ್ತಾ ಇದ್ದಿದ್ದು ಬಂಡಾಜೆ ಜಲಪಾತದ ಕಡೆಗೆ. ಹತ್ರ ಬರ್ತಿದ್ದ ಹಾಗೆ ನೀರು ಹರಿಯೋ ಸದ್ದು ಕೇಳ್ತಾ ಇದ್ರೆ ಅದಕ್ಕಿಂತ ಇನ್ನೊಂದು ಸಂಗೀತ ಇಲ್ಲ ಅನ್ಸ್ಬೇಕು..ಅನ್ಸೋದೇನು ಅದು ನಿಜ ಅಲ್ವಾ..!?
ಸರಿ...ಹಾಗೆ ಕೇಳ್ತಾ ಮುಂದೆ ಹೋದ್ವಿ.. ಅಲ್ಲಿ ಕಂಡಿದ್ದು ಸ್ವರ್ಗ ಕಣ್ಮುಂದೆ ಬಂತು ಅಂತಾರಲ್ವ..ಹಾಗಿರೋ ದೃಶ್ಯ.
ನಾವು ಬಂಡಾಜೆ ಜಲಪಾತದ ಮೇಲಿದ್ವಿ. ಹೌದು, ಜಲಪಾತದ ತುದಿಲಿ.. ಇದ್ನ ಓದೋವಾಗ ಮುಂಗಾರು ಮಳೆ ಸೀನ್ ನೆನಪಿಗೆ ಬಂದ್ರೆ ತಪ್ಪೇನಲ್ಲ. ಅದೇ ದೃಶ್ಯ..ರಭಸವಾಗಿ ಬರೋ ನೀರು, ಬಂಡೆಗಳ ನಡುವೆ ಜಾರಿ ಪ್ರಪಾತಕ್ಕೆ ಬೀಳೋ ರೀತಿಯನ್ನು ನೋಡ್ತಾ ಇದ್ರೆ ಮನಸಲ್ಲಿ ಭಯ, ಖುಷಿ, ಆಶ್ಚರ್ಯ ಜೊತೆಗೆ ಏನೋ ಸಾಧಿಸಿದ ತೃಪ್ತಿ ಇತ್ತು. The climb was worth it ಅಂತಾರಲ್ಲ ಆ ತರದ ಭಾವನೆ...!
ಮೋಡ ಸ್ವಲ್ಪ ಜಾಸ್ತಿನೇ ಇದ್ದಿದ್ರಿಂದ ಜಲಪಾತ ಬೀಳೋ ಪ್ರಪಾತದ ದೃಶ್ಯ ನೋಡೋದು ಸ್ವಲ್ಪ ಕಷ್ಟ ಆಯ್ತು.
ಸಣ್ಣ ಎಚ್ಚರಿಕೆ ಇಲ್ಲಿ ಅತ್ಯಗತ್ಯ.. ಕಾಲ್ ಜಾರಿದ್ರೆ ಒಂದೇ ಸಲ ದಿಡುಪೆ(ಜಲಪಾತದ ಬುಡದಲ್ಲಿರೋ ಊರು) ಯಲ್ಲಿರೋದು ಖಂಡಿತ!

ಇಲ್ಲಿಗೆ ತಲುಪುವಾಗ ಗಂಟೆ ೧ ಆಗಿದ್ರಿಂದ ಇಲ್ಲೇ ಊಟ ಮುಗ್ಸ್ಕೊಂಡು ಹೋಗೋಣ ಅಂತ ಅಲ್ಲೇ ಇರೋ ಕಲ್ಲು ಬಂಡೆಯ ಮೇಲೆ ಟಿಫಿನ್ ಬಾಕ್ಸ್ ತೆರೆದು  ಹರಿಯೋ ನೀರು ನೋಡ್ತಾ ಪಲಾವ್ ನ ಖಾಲಿ ಮಾಡಿದ್ವಿ. ಚಾರಣದ ಇನ್ನೊಂದು ವೈಶಿಷ್ಟ್ಯವೆಂದರೆ ಅಪರಿಚಿತರು ಗೆಳೆಯರಾಗೋದು..ನಮ್ಮ ತಂಡದ ಜೊತೆಗೆ ಇನ್ನೊಂದು ತಂಡ ಸೇರಿ ಒಟ್ಟು ೧೦ ಜನ ಪ್ರಕೃತಿ ಸೌಂದರ್ಯ ನೋಡ್ತಾ ಊಟ ಮುಗಿಸಿದ ನಂತರ ಮುಂದಿನ ನಡೆ ಆರಂಭ ಆಯ್ತು.
ಮುಂದಿನ ನಡೆ ಬಲ್ಲಾಳರಾಯನ ದುರ್ಗದ ಕಡೆ. ಬಂದ ದಾರಿನ ಮತ್ತೆ ನಡೆದು ಹೋಗಬೇಕಾದ ಸ್ಥಿತಿ. ಬರೋವಾಗ ಇಳಿಜಾರು..ಆರಾಮಾಗಿ ಬಂದಿದ್ದ ದಾರಿ.. ಹತ್ತೋವಾಗ ನಂಗಂತೂ ಮುಂದೆ ನಡಿಯಲ್ಲ ಅಲ್ಲೇ ಇದ್ದು ಬಿಡೋದು ಒಳ್ಳೇದು ಅನ್ನೋವಷ್ಟು ಸುಸ್ತು.
ಆದ್ರೆ ಆ ಅವಕಾಶ ಇಲ್ಲ ಅನ್ನೋದು ಗೊತ್ತು.. ಮಳೆ ಜೋರಾಗಿ ಸುರಿತಾ ಇತ್ತು... ನಡಿಗೆ ಮುಂದೆ ಸಾಗ್ತಾ ಇತ್ತು. ಮಳೆಯನ್ನ ಲೆಕ್ಕಿಸದೆ ಮನಸ್ಸಿಗೆ ಸಂತೃಪ್ತಿ ಕೊಡೋ ವಿಷಯದ ಬಗ್ಗೆ ಮಾತಾಡ್ತಾ ಗುರಿ ದೂರ ಇದ್ರು.. ಇಷ್ಟು ಬೇಗ ಬಂದೇ ಬಿಟ್ವಾ ಅನ್ನೋ ಪ್ರಶ್ನೆ ಕೋಟೆ ತಲುಪಿದಾಗ. ಪರಮಾಣು ಇಂದ ಪರಮಾತ್ಮನ ತನಕ ಚರ್ಚೆ ವಿಚಾರ ವಿಮರ್ಶೆ ನಡೆದಿತ್ತು ಈ ಪ್ರಯಾಣದಲ್ಲಿ...ಎಂದಿಗೂ ನೆನಪಿನಲ್ಲಿ ಉಳಿಯೋ ಅನುಭವ.

ಇಲ್ಲಿಗೆ ನಮ್ಮ ಎರಡೂ ಗುರಿಯನ್ನು ತಲುಪಿದ ಸಮಾಧಾನವೂ ಇತ್ತು.
ಗಂಟೆ ೨.೩೦ ಆಗಿದ್ರಿಂದ ಬೇಗ ಬೇಗನೆ ಹೆಜ್ಜೆ ಹಾಕುತ್ತಾ ಬೆಟ್ಟವನ್ನು ಇಳಿಯಲು ಆರಂಭಿಸಿದ್ವಿ. ಅಂತೂ ಇಂತೂ ಸುಮಾರು ೫ ಗಂಟೆಗೆ ಚಾರಣ ಆರಂಭಿಸಿದ ಸ್ಥಳ ತಲುಪಿದಾಗ...ಕಾಲುಗಳು ತಾಳ ಹಾಕ್ತಾ ಇದ್ವು. ನಮ್ಮಲ್ಲಿ ಏನೋ ಸಾಧಿಸಿದ ಹುರುಪಿತ್ತು...ಇದೇ ರೀತಿಯ ಅಡ್ವೆಂಚರ್ ಇನ್ನೂ ಮಾಡ್ಬೇಕು ಅನ್ನೋ ಆಸೆ ಇತ್ತು.
ನನ್ನ ನಂಬಿಕೆ ಯಾವತ್ತೂ...ಪ್ರಯಾಣ ಗುರಿಗಿಂತ ಸುಂದರವಾಗಿರುತ್ತದೆ ಅಂತ. ಆದ್ರೆ ಇಲ್ಲಿ...ಪ್ರಯಾಣ ಅಧ್ಬುತ..ಗುರಿ ಮುಟ್ಟಿದಾಗ ಕಂಡ ದೃಶ್ಯ ಅತ್ಯಧ್ಬುತ.
ಉತ್ಪ್ರೇಕ್ಷೆ ಅಲ್ಲ...ಇದು ಸತ್ಯ!!!
ಎಲ್ಲಾ ಚಾರಣಿಗರು ಅನುಮಾನವಿಲ್ಲದೇ ಇಷ್ಟ ಪಡುವ ಚಾರಣ...ಬಂಡಾಜೆ.♥️

Comments

Post a Comment

Popular posts from this blog

ನೆನಪುಗಳ ಮಾತು ಮಧುರ...

"Hampi"ness

Buran Ghat - A Path Unfinished